ಹಿರಿಯಣ್ಣ, ಎಂ
 	1871-1950. ಸುಪ್ರಸಿದ್ಧ ವಿದ್ವಾಂಸರು, ತತ್ತ್ವಜ್ಞಾನಿಗಳು. 1871 ಮೇ 7 ರಂದು ಜನಿಸಿದರು. ಬಾಲ್ಯದ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ನಡೆಸಿ ಅನಂತರ ಮದರಾಸಿನ ಕ್ರಿಶ್ಚನ್ ಕಾಲೇಜು ಸೇರಿ ಬಿ.ಎ. ಮತ್ತು ಎಂ.ಎ. ಪದವಿಗಳನ್ನು ಗಳಿಸಿದರು. ಮೈಸೂರು ಗೌರ್ನಮೆಂಟ್ ಓರಿಯಂಟಲ್ ಲೈಬ್ರರಿಯ (ಈಗಿನ ಓರಿಯೆಂಟಲ್ ರಿಸರ್ಚ್ ಇನ್‍ಸ್ಟಿಟ್ಯೂಟ್) ಲೈಬ್ರೇರಿಯನ್ ಆದರು (1891). ಮುಂದಿನ ವರ್ಷ ಸರ್ಕಾರಿ ಕಚೇರಿಯೊಂದರಲ್ಲಿ ಸ್ವಲ್ಪ ಕಾಲ ಗುಮಾಸ್ತರಾಗಿದ್ದರು. ಆಮೇಲೆ ಸೈದಾಪೇಟೆಯ ಟೀಚರ್ಸ್ ಕಾಲೇಜಿನಲ್ಲಿ ಎಲ್.ಟಿ. ಪದವಿ ಪಡೆದರು (1895). 1896-1907ರಲ್ಲಿ ಮೈಸೂರಿನ ಗೌರ್ಮೆಂಟ್ ನಾರ್ಮಲ್ ಸ್ಕೂಲಿನ ಸಹೋಪಾಧ್ಯಾಯರಾಗಿ ಕೆಲಸ ಮಾಡುತ್ತಿದ್ದು, ಅಲ್ಲೇ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದರು (1907-12). ಈ ಅವಧಿಯಲ್ಲಿ ಕನ್ನಡ ಶಿಕ್ಷಣದ ಬಗೆಗೆ ಪುಸ್ತಕವೊಂದನ್ನು ಬರೆದುದಲ್ಲದೆ ಕನ್ನಡದ ಪ್ರಚಾರ ಅಭಿವೃದ್ಧಿಗಳಿಗಾಗಿ ಅಂದು ಶ್ರಮಿಸುತ್ತಿದ್ದ ಮುಂದಾಳುಗಳಲ್ಲಿ ಒಬ್ಬರಾಗಿದ್ದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸಂಸ್ಕøತ ಅಧ್ಯಾಪಕರಾದರು (1912). ಉಪ-ಪ್ರಾಧ್ಯಾಪಕರೂ (1914) ಪ್ರಾಧ್ಯಾಪಕರೂ (1917) ಆಗಿ ಕೆಲಸಮಾಡಿ ನಿವೃತ್ತರಾದರು (1927). ಈ ಮಧ್ಯೆ 1921ರಲ್ಲಿ ಸ್ವಲ್ಪಕಾಲ ಗೌರ್ಮೆಂಟ್ ಓರಿಯೆಂಟಲ್ ಲೈಬ್ರರಿಯ ಕ್ಯೂರೇಟರ್ ಆಗಿ ಕೆಲಸ ಮಾಡುವ ಸಂದರ್ಭ ಇವರಿಗೆ ಲಭಿಸಿತ್ತು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ಸಮಯದಲ್ಲಿ ಸಂಸ್ಕøತ ಭಾಷೆಸಾಹಿತ್ಯಗಳನ್ನಲ್ಲದೆ ಭಾರತೀಯ ತತ್ತ್ವಶಾಸ್ತ್ರವನ್ನೂ ಬೋಧಿಸುತ್ತಿದ್ದರು. ಅಷ್ಟೇ ಅಲ್ಲದೆ ಭಾರತೀಯ ತತ್ತ್ವಜ್ಞಾನದ ಸಂಪೂರ್ಣವಾದ ಅರ್ಥವನ್ನು ಅರಿತವರಾಗಿ, ಅದರ ತತ್ತ್ವಗಳ ಅನುಷ್ಠಾನದಲ್ಲಿ ತೊಡಗಿದರು. ರಾಧಾಕೃಷ್ಣನ್ ಮುಂತಾದ ಮಹಾವ್ಯಕ್ತಿಗಳು ಇವರೊಡನೆ ನಿಕಟಸ್ನೇಹವನ್ನು ಬೆಳೆಸಿದರು. ಇವರ ಅನುಗ್ರಹಪರ ಪ್ರಭಾವದಲ್ಲಿ ಒಂದು ಅಮೋಘ ಶಿಷ್ಯಪರಂಪರೆ ಬೆಳೆಯಿತು. ವಿದ್ವಾಂಸರ ಪರಿಷತ್ತುಗಳು, ಸಮ್ಮೇಳನಗಳು ಇವರನ್ನು ಅಧ್ಯಕ್ಷಪದವಿ ಇತ್ಯಾದಿಗಳಿಗೆ ಆರಿಸಿ ಗೌರವಿಸಿದುರು; ಮದರಾಸು ಸಂಸ್ಕøತ ಅಕಾಡೆಮಿಯಿಂದ ಇವರಿಗೆ ಸಂಸ್ಕøತ ಸೇವಾಧುರೀಣ ಎಂಬ ಪ್ರಶಂಸೆ ದೊರೆತಿತು. ನುಡಿದಂತೆ ನಡೆಯುತ್ತಿದ್ದುದೂ ಅದಕ್ಕೋಸ್ಕರ ನುಡಿಯ ವಿಚಾರದಲ್ಲಿ ಮಿತಿ ಎಚ್ಚರಿಕೆಗಳನ್ನು ಸದಾ ಪಾಲಿಸುತ್ತಿದ್ದುದೂ ಇವರ ದೊಡ್ಡ ಗುಣಗಳಲ್ಲೊಂದು. ಚ್ಯುತಿಕಾಣದ ಕರ್ತವ್ಯನಿಷ್ಠೆ ಇವರ ಮತ್ತೊಂದು ಅತಿ ಶೋಭಾಯಮಾನ ಗುಣ. ಇದರ ಮೂಲಕ ಇವರು ತಮ್ಮ ವ್ಯಕ್ತಿತ್ವದ ಔನ್ನತ್ಯವನ್ನು ಅಸಾಧಾರಣವಾಗಿ ಸಾಧಿಸಿಕೊಂಡಿದ್ದರು. ಇವರ ಅನೇಕ ಶಿಷ್ಯರ ಮತ್ತು ಅಭಿಮಾನಿಗಳ ಪ್ರಯತ್ನದಿಂದ ಸ್ಮಾರಕ ಗ್ರಂಥವೊಂದು ಪ್ರೊ.ಎಂ. ಹಿರಿಯಣ್ಣ ಕಮೆಮೊರೇಷನ್‍ವಾಲ್ಯೂಂ ಎಂಬ ಹೆಸರಿನಿಂದ 1952ರಲ್ಲಿ ಪ್ರಕಟಗೊಂಡಿತು.

	ಇವರ ಸದ್ಗುಣಗಳು ಮತ್ತು ಹಿರಿದಾದ ವ್ಯಕ್ತಿತ್ವ ಇವರ ಬರೆವಣಿಗೆ ಗಳಲ್ಲಿ ಹಾಗೂ ಗ್ರಂಥಗಳಲ್ಲಿ ಕಂಡುಬರುತ್ತವೆ. ಭಾರತೀಯ ತತ್ತ್ವಜ್ಞಾನದ ಜೀವನ್ಮುಕ್ತಿ ಮುಂತಾದ ಗಹನಸಿದ್ಧಾಂತಗಳ ಪ್ರತಿಪಾದನೆಯನ್ನೊಳಗೊಂಡ ಅವು ಗಂಭೀರ, ಸ್ವಚ್ಛ, ಸರಳ ಭಾಷೆಯಲ್ಲಿ ಆ ಸಿದ್ಧಾಂತಗಳನ್ನು ವಿವರಿಸುವುದಲ್ಲದೆ ಅವುಗಳ ಅನುಷ್ಠಾನದಲ್ಲಿ ಗ್ರಂಥಕರ್ತರು ಪರಿಣತ ರಾಗಿದ್ದರೆಂಬುದನ್ನೂ ಸ್ಪಷ್ಟವಾಗಿ ಸೂಚಿಸುತ್ತವೆ.

	ಇವರ ಪ್ರಕಟಿತ ಗ್ರಂಥಗಳು ಹೀಗಿವೆ: ಔಟ್‍ಲೈನ್ಸ್ ಆಫ್ ಇಂಡಿಯನ್ ಫಿಲಾಸಫಿ, ದಿ ಎಸೆನ್ಷಿಯಲ್ಸ್ ಆಫ್ ಇಂಡಿಯನ್ ಫಿಲಾಸಫಿ, ಪಾಪ್ಯುಲರ್ ಎಸ್ಸೇಸ್ ಇನ್ ಇಂಡಿಯನ್ ಫಿಲಾಸಫಿ, ದಿ ಕ್ವೆಸ್ಟ್ ಆಫ್ಟರ್ ಪರ್‍ಫೆಕ್ಷನ್, ಆರ್ಟ್ ಎಕ್ಸ್‍ಪೀರಿಯನ್ಸ್, ಸಂಸ್ಕøತ ಸ್ಟಡೀಸ್, ಇಂಡಿಯನ್ ಫಿಲಸಾಫಿಕಲ್ ಸ್ಟಡೀಸ್ ಸಂಪುಟ-1, ದಿ ಮಿಷನ್ ಆಫ್ ಫಿಲಾಸಫಿ, ರಿವ್ಯೂಸ್. ಇಲ್ಲಿನ ಮೊದಲ ಎಂಟು ಗ್ರಂಥಗಳಲ್ಲಿ ಭಾರತೀಯ ತತ್ತ್ವಜ್ಞಾನದ ಪ್ರಾರಂಭ ಬೆಳೆವಣಿಗೆಗಳೂ ಅಲ್ಲಿನ ವಿವಿಧ ಸಮಸ್ಯೆ ಸಿದ್ಧಾಂತಗಳ ಸೂಕ್ತ ವಿವರಣೆಯೂ ಸಂಸ್ಕøತ ಸಾಹಿತ್ಯದ ಪ್ರಮುಖ ಪ್ರವೃತ್ತಿಗಳೂ ಹಾಗೂ ಸೌಂದರ್ಯಮೀಮಾಂಸೆಯ ವಿಚಾರವೂ ಹೃದಯಂಗಮವಾಗಿ ನಿರೂಪಿತವಾಗಿವೆ. ರಿವ್ಯೂಸ್ ಎಂಬ ಗ್ರಂಥದಲ್ಲಿ ಇವರು ಮಾಡಿದ ಪುಸ್ತಕಾವಲೋಕನಕ್ಕೆ ಸಂಬಂಧಪಟ್ಟ ಹಲವಾರು ಪ್ರೌಢ ಲೇಖನಗಳಿವೆ.

	ಇವರು ಪೀಠಿಕಾಪೂರ್ವಕವಾಗಿ ಇಂಗ್ಲಿಷ್ ಅನುವಾದಗಳಲ್ಲಿ ಕೊಟ್ಟಿರುವ ಗ್ರಂಥಗಳು-ಈಶಾವಾಸ್ಯೋಪನಿಷದ್, ಕೇನೋಪನಿಷದ್, ಕಾಠಕೋಪನಿಷದ್, ಬೃಹದಾರಣ್ಯಕೋಪನಿಷದ್ (ಭಾಗ 1). ಇಂಗ್ಲಿಷಿನಲ್ಲಿ ಪೀಠಿಕೆ ಟಿಪ್ಪಣಿಗಳೊಡನೆ ಇವರಿಂದ ಸಂಪಾದಿತ ಗ್ರಂಥಗಳು - ನೈಷ್ಕಮ್ರ್ಯಸಿದ್ಧಿ (ಸುರೇಶ್ವರಾಚಾರ್ಯ), ವೇದಾಂತಸಾರ (ಸದಾನಂದ) - ಅನುವಾದ ಸಹಿತ, ಇಷ್ಟಸಿದ್ಧಿ (ವಿಮುಕ್ತಾತ್ಮ); ಈ ಗ್ರಂಥಗಳನ್ನಲ್ಲದೆ ಅನೇಕ ಲೇಖನಗಳನ್ನೂ ಇವರು ಬರೆದಿದ್ದಾರೆ. ಅವುಗಳಲ್ಲಿ ಕೆಲವು ಶಿಕ್ಷಣ ಪದ್ಧತಿಯನ್ನು ಕುರಿತವು; ಉಳಿದವು ಸಂಸ್ಕøತ ಸಾಹಿತ್ಯಕ್ಕೂ ಭಾರತೀಯ ದರ್ಶನಗಳಿಗೂ ಸಂಬಂಧಿಸಿದವು.

	ಇವರಿಂದ ರಚಿತವಾದ ಸಂಪಾದಿತವಾದ ಗ್ರಂಥಗಳು ಭಾರತೀಯ ತತ್ತ್ವಜ್ಞಾನದ ಹಾಗೂ ಅನುಭವದ ಅಮೂಲ್ಯ ವಿಚಾರಗಳಿಂದ ತುಂಬಿವೆ. ಇವರ ಹಲವಾರು ಗ್ರಂಥಗಳಲ್ಲಿ ಭಾರತೀಯ ತತ್ತ್ವಜ್ಞಾನದ ರೂಪರೇಖೆಗಳೂ ಸಿದ್ಧಾಂತ ಪ್ರತಿಪಾದನೆ, ವಿವರಣೆಗಳೂ ವಿಶೇಷವಾಗಿ ಕಂಡುಬರುತ್ತವೆ. ಅಲ್ಲದೆ ಪ್ರಾಚೀನ ಭಾರತದ ಸಂದೇಶದ ಸಾರವೆನಿಸಿ ಕೊಳ್ಳಬಹುದಾದ ಆಧ್ಯಾತ್ಮಿಕ ಪರಿಪೂರ್ಣತೆಯೆಂಬ ಆದರ್ಶದ ಸ್ವರೂಪ ಎಂಥದ್ದೆಂಬುದನ್ನು ಇವರು ಒತ್ತಿಹೇಳಿದ್ದಾರೆ. ಈ ಆದರ್ಶ ಕಾಣಬರು ವುದು ಕೇವಲ ತತ್ತ್ವಜ್ಞಾನಕ್ಕೆ ಸಂಬಂಧಪಟ್ಟ ಸಂಸ್ಕøತ ಗ್ರಂಥಗಳಲ್ಲಿ ಮಾತ್ರವಲ್ಲದೆ, ಸಾಮಾನ್ಯವಾಗಿ ಎಲ್ಲ ಸಂಸ್ಕøತ ಸಾಹಿತ್ಯವೂ ಇದರ ಉಸಿರುಳ್ಳದ್ದೆಂದು ಇವರ ಮತ. ಕಾಳಿದಾಸ, ಭವಭೂತಿ ಮುಂತಾದ ಮಹಾಕವಿಗಳ ಗ್ರಂಥಗಳೂ ಅದೇ ಪ್ರಕಾರ ಅಲಂಕಾರಶಾಸ್ತ್ರವೂ ಈ ಆದರ್ಶದಿಂದ ಪ್ರಭಾವಿತವೆಂಬ ವಿಚಾರವನ್ನು ಸಂದರ್ಭೋಚಿತವಾಗಿ ಇವರು ತೋರಿಸಿಕೊಟ್ಟಿದ್ದಾರೆ. ಆಲಂಕಾರಶಾಸ್ತ್ರದಲ್ಲಿನ ಸೌಂದರ್ಯ ಮೀಮಾಂಸೆಯ ಭಾರತೀಯ ದರ್ಶನದ ಬ್ರಹ್ಮಾನಂದವೆಂಬ ಮುಖ್ಯತತ್ತ್ವದ ಆಶ್ರಯದಲ್ಲಿ ರೂಪುಗೊಂಡಿರುವ ಬಗೆಯನ್ನು ನಿರೂಪಿಸಿ, ಭಾರತೀಯ ದಾರ್ಶನಿಕರು ಸೌಂದರ್ಯಮೀಮಾಂಸೆಗೂ ಸಾಕಷ್ಟು ಗಮನವನ್ನು ಕೊಟ್ಟಿದ್ದಾರೆಂಬುದನ್ನು ಸ್ಪಷ್ಟಪಡಿಸಿದ್ದಾರೆ. ಹೀಗೆ ಭಾರತೀಯ ತತ್ತ್ವಜ್ಞಾನದ ಅಧ್ಯಯನ ಅನುಷ್ಠಾನಗಳ ಸಮಗ್ರ ಪರಿಶೀಲನೆ ಪ್ರತಿಪಾದನೆಗಳು ಈ ಕ್ಷೇತ್ರದಲ್ಲಿ ಇವರ ವಿಶಿಷ್ಟ ಕೊಡುಗೆಗಳಾಗಿವೆ. ಅಲ್ಲದೆ ಅಲಂಕಾರಶಾಸ್ತ್ರವನ್ನು ಕುರಿತು ಇವರು ಮಾಡಿರುವ ಸಮೀಕ್ಷೆಗಳು ರಸಸ್ವರೂಪವನ್ನು ವಿವರಿಸುವುದರ ಜೊತೆಗೆ ರಸಾನುಭವಕ್ಕೂ ದರ್ಶನಗಳಲ್ಲಿನ ಬ್ರಹ್ಮಾನಂದಕ್ಕೂ ಇರುವ ಹೋಲಿಕೆ ವ್ಯತ್ಯಾಸಗಳ ನಿರೂಪಣೆಯನ್ನೊಳಗೊಂಡು ಈ ಶಾಸ್ತ್ರದ ವ್ಯಾಪ್ತಿವೈಶಿಷ್ಟ್ಯಗಳ ಅರಿವು ಹೆಚ್ಚುವಂತೆ ಮಾಡಿವೆ.

	ಹೀಗೆ ಸದ್ಗುಣನಿಷ್ಠೆ, ಧ್ಯೇಯಪರಿಪಾಲನೆ, ಗ್ರಂಥರಚನೆ ಮುಂತಾದ ಸಾಧನೆಗಳಿಂದ ಇವರು ತಮ್ಮ ವ್ಯಕ್ತಿತ್ವದ ಶ್ರೇಷ್ಠತೆಯನ್ನು ರೂಪಿಸಿ ಕೊಂಡಿದ್ದರು. ಭಾರತೀಯ ದಾರ್ಶನಿಕ ಜೀವನದ ಮಹತ್ತ್ವವನ್ನರಿತು ಅದಕ್ಕೆ ಸಂಬಂಧಪಟ್ಟ ಉಪದೇಶ ಸಂದೇಶಗಳನ್ನು ಆಚರಣೆಗೆ ತಂದ ಇವರ ಜೀವಿತ ಸಂಪೂರ್ಣತೆ ಹಾಗೂ ಸಾರ್ಥಕತೆಗಳಿಗೆ ಆದರ್ಶವಾಗಿದೆ. ಇವರು 1950 ಸೆಪ್ಟೆಂಬರ್ 19ರಂದು ನಿಧನರಾದರು.									
		(ಬಿ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ